My Journey from the Magical World of Western Ghats to Rocky Hills of Eastern Ghats (Kannada – Part IV)

9 months, 3 weeks ago 17
Posted in: Blog

From freeing a snake caught in a snare, to witnessing a sparring match between a leopard and pack of dholes, to startling a pair of tiger cubs, Satish Nagathan regales with real tales from the Andhra-Telangana landscape.


 

ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ..

ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ..

ಸತೀಶ ಗಣೇಶ ನಾಗಠಾಣ.

ಮುಂದುವರೆದ ಭಾಗ…

ಬೆಟ್ಟ ಹತ್ತಿ ಬಂದಿದ್ದರಿಂದ ಸಿಕ್ಕಾಪಟ್ಟೆ ದಣಿವು ಆಗಿತ್ತು. ನನಗಂತು ವಿಪರೀತ ನೋವು ಕಾಲುಗಳನ್ನ ಅತ್ತಂದಿತ್ತ ಎತ್ತಿ ಇಡಲು ಹರಸಾಹಸ ಪಡುತಿದ್ದೆ. ಒಂದು ದಿನ ವಿಶ್ರಾಂತಿ ಪಡೆಯಬೇಕೆಂದು ಕೋಣೆಯಲ್ಲಿ ಗಾಢ ನಿದ್ರೆಯ ಕುಂಭಕರಣನ ಹಾಗೇ ನಿದ್ದೆ ಹೊಡೆಯುತ್ತಿದ್ದೆ.  ಸ್ವಲ್ಪ ಸಮಯದ ನಂತರ ಯಾರೋ ಜೋರಾಗಿ ಕೂಗುತ್ತ ಕೋಣೆಯ ಹತ್ತಿರ ಓಡೋಡಿ ಬಂದು ಹಾವು ಹಾವು ಅಂತ ಕಿರಚುತ್ತಿದ್ದರು. ಕೋಣೆಯಲ್ಲಿ ಇದ್ದವರು ಹೊರಗಡೆ ಎದ್ನೋಬಿದ್ನೋ ಎನ್ನದೆ ಓಡುತ್ತಿರುವ ಶಬ್ದದಿಂದ ನನ್ನ ನಿದ್ದೆ ಹಾಳಾಗಿ ಹೋಯಿತು. ಏನಾಯಿತು! ಏನಾಯಿತು! ಅಂತ ನಾನು ಸಹ ನಿದ್ದೆಗಣ್ಣಿನಲ್ಲೆ ಓಡಿದೆ.

ಕೆಲಸದ ನಿಮಿತ್ತ ನಾವು ತಂಗಿದ್ದ ಕೋಣೆಯ ಹಿಂಬದಿಯಲ್ಲಿ ಒಂದು ದೊಡ್ಡ ಗಾತ್ರದ ಹೆಬ್ಬಾವು ವಿಲವಿಲ ಅಂತ ಒದ್ದಾಡುತ್ತಿತ್ತು. ಸುಮಾರು 12 ರಿಂದ 13 ಅಡಿಗಳಷ್ಟು ಉದ್ದವಾದ ಹೆಬ್ಬಾವಿನ ಕೊರಳಿಗೆ ಉರಳು ಸಿಕ್ಕು ರಕ್ತಸ್ರಾವದಿಂದ ಒದ್ದಾಡುತ್ತಿರುವ ದೃಶ್ಯವನ್ನು ನೋಡಿ ಅತೀವ ಬೇಸರ ಉಂಟಾಯಿತು. ಯಾರೋ ಬೇಟೆಗಾರರು ಬೇಟೆಯಾಡಲು ಉರಳನ್ನ ನೆಲದ ಬದಿಯಲ್ಲಿ ಯಾರಿಗೂ ಕಾಣದ ಹಾಗೇ ಚಾಣಾಕ್ಷತನದಿಂದ ಯಾವುದಾದರೂ ಪ್ರಾಣಿ ಸಿಕ್ಕಿಹಾಕಿಕೊಳ್ಳ ಬಹುದೆಂದು ಹಾಕಿದ್ದರು. ಆದರೆ, ಅಚಾನಕ್ಕಾಗಿ ಈ ಹೆಬ್ಬಾವು ಸಿಕ್ಕಿಹಾಕಿಕೊಂಡಿತ್ತು.

ದ್ವಿ ಚಕ್ರ ವಾಹನಕ್ಕೆ ಬಳಸಲ್ಪಡುವ ಕ್ಲಚ್ ವ್ಹಾಯರ್ ನ್ನು ಕಳ್ಳ ಬೇಟೆಗಾರರು ಉರಳನ್ನಾಗಿ ಬಳಸುತ್ತಿದ್ದರು ಎಂಬುದು ನಮಗೆ ಆಗಲೆ ಗೊತ್ತಾಗಿದ್ದು . ಹೇಗಾದರೂ ಮಾಡಿ ಈ ಹೆಬ್ಬಾವನ್ನ ಉಳಿಸಬೇಕು ಇಲ್ಲವಾದಲ್ಲಿ ಸಾಯುವುದಂತು ಗ್ಯಾರಂಟಿ ಅಂತ ನಮ್ಮ ನಮ್ಮಲ್ಲಿ ಚರ್ಚೆ ಶುರುವಾಯಿತು. ನಾನು ಮತ್ತು ಶ್ರೀಧರ, ಕಿರಣ, ಪವನ ಜೊತೆಗೂಡಿ ನೆರದಂತಹ ಜನಸಮೂಹವನ್ನ ಕೆಲ ದೂರದವರಗೆ ಸರಿಸಲು ಹರಸಾಹಸಪಡುವಷ್ಟರಲ್ಲಿ ಸಾಕಾಗಿ ಹೋಗಿತ್ತು.  ಒಟ್ಟಿನಲ್ಲಿ ಜನರನ್ನ ಹತೋಟಿಗೆ ತರುವಲ್ಲಿ ಯಶಸ್ವಿಯಾದೆವು. ನನಗಂತು ಹಾವು ಹಿಡಿಯುವದರ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಹಾವನ್ನು ಹಿಡಿಯಬೇಕೆಂದರು ಅದರ ಬಗ್ಗೆ ಸಾಮಾನ್ಯ ಜ್ಞಾನವಾದರು ಬೇಕು ಅಂತ ಚಿಂತಿಸುತ್ತಾ ನಿಂತಿರಬೇಕಾದರೆ ನನಗೆ ಕಿರಣ ರವರು ತಟ್ಟನೆ ನೆನಪಿಗೆ ಬಂದರು. ಕೆಲ ವಿಷರಹಿತ ಹಾವುಗಳನ್ನ ಹಿಡಿದ್ದಿದ್ದೇನೆ ಎಂದು ಕ್ಯಾಂಪಗಳಲ್ಲಿ ಚರ್ಚೆಯ ಸಂಧರ್ಭದಲ್ಲಿ ಹೇಳುತ್ತಿದ್ದರು. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸುವರ್ಣ ಅವಕಾಶ ಸಿಕ್ಕಿದಂತಾಯಿತು ಅಂತ ಕಿರಣರವರನ್ನ ಕೇಳಿಯೇ ಬಿಟ್ಟೆ ರೀ.. ಕಿರಣ ನೀವು ಹಾವು ಹಿಡಿಯುವುದರಲ್ಲಿ ಚತುರರು ಅಂತ ಎಲ್ಲರೂ ಹೇಳತಿರತಾರ ಹೇಗಾದರು ಮಾಡಿ ಈ ಹೆಬ್ಬಾವನ್ನ ಹಿಡಿರಿ ಅಂತ ಹೇಳಿದೆ. ಆಗ, ಆ ವ್ಯಕ್ತಿ  ಚಿಕ್ಕ ಪುಟ್ಟ ಹಾವುಗಳನ್ನ ಹಿಡಿತಿನಿ ಆದರೆ ಈ ದೊಡ್ಡ ಗಾತ್ರದ ಹೆಬ್ಬಾವನ್ನ ಹಿಡಿಯಲು ನನಗೆ ಸಾಧ್ಯವಿಲ್ಲ ಅಂತ ಸ್ವಲ್ಪ ದೂರ ಸರಿದರು. ಎಲ್ಲ ಸಹಪಾಠಿಗಳಿಗೆ ಕೇಳಿದರು ನನ್ನ ಕಡೆಯಿಂದ ಈ ಕೆಲಸ ಆಗುವುದಿಲ್ಲ ಬೇಕಾದರೆ ನೀವೆ ಹಿಡಿಯಿರಿ ಎಂದು ನನ್ನ ಮೇಲೆ ‘ತಿರುಗು ಬಾಣ’ ಬಿಟ್ಟರು.

ಏನಪ್ಪಾ! ಮಾಡೋದು ಯಾರು ಮುಂದೆ ಬರುತ್ತಿಲ್ಲವಲ್ಲ ಹೆಂಗಪ್ಪ ಈ ದಾಂಡಿಗನನ್ನ ಹಿಡಿಯೋದು ನೋಡಿದರೆ ಭಯ ಬರುತ್ತಿದ್ದೆ. ಬುಸ್… ಅಂತ ಜೋರಾಗಿ ಶಬ್ದ ಮಾಡುತ್ತಿದ್ದೆ ಅದನ್ನ ಕೇಳಿ ನಮ್ಮಲ್ಲಿರುವವರಿಗೆ ನಡುಕ.  ಏನಾದರೂ ಆಗಲಿ ಅಂತ ನೆರೆದಂತಹ ಸಹಪಾಠಿಗಳ ಜೊತೆಗೂಡಿ ಒಂದು ಯೋಜನೆ ರೂಪಿಸಿದೆ. ನೋಡಿ ನನಗೆ ನಾಲ್ಕರಿಂದ ಐದು ಜನ ಬೇಕು. ಉಳಿದವರು ಬೇಗ ಹೋಗಿ ಮೂರು ನಾಲ್ಕು ಬಕೇಟನಲ್ಲಿ ನೀರು ತಂದರೆ ಸಾಕು ಆಮೇಲೆ ಒಂದು ಉರಳನ್ನ ಕತ್ತರಿಸಲು ಪಕ್ಕಡ ಬೇಕು ಎಂದು ಹೇಳಿದೆ. ಉಳಿದಂತಹ ಸದಸ್ಯರು ಮೂರ್ನಾಲ್ಕು ಬಕೆಟನಲ್ಲಿ ನೀರನ್ನ ತುಂಬಿ ತಂದರು. ಈ ತೆಲಂಗಾಣದ ವಿಪರೀತ ಬಿಸಿಲಿನ ತಾಪ ನಮಗು ಸಹ ತಟ್ಟುತ್ತಿತ್ತು. ನಮ್ಮಲ್ಲಿ ಇರುವಂತವರಿಗೆ ಮೊದಲು ಹೆಬ್ಬಾವಿನ ಮೈ ಮೇಲೆ ನಿಧಾನ ಗತಿಯಲ್ಲಿ ದೂರದಿಂದ ನೀರು ಹಾಕಲು ಪ್ರಾರಂಭಿಸಿದೆವು ಅದರ ದೇಹ ತಂಪಾಗಿಡುವಂತೆ ಕೆಲ ಹೊತ್ತು ಸಮಯ ತಡೆ ಹಿಡಿದಾದ ನಂತರದಲ್ಲಿ ನಾನು ಮತ್ತು ಶ್ರೀಧರ ಎಲ್ಲರಿಗೂ ಹೇಳಿದೆವು. ಮೊದಲು ನಾವು ಹೇಳಿದ ಹಾಗೇ ಅದಕ್ಕೆ ನೋವಾಗದ ಹಾಗೇ 4 ರಿಂದ 5 ಜನ ಹೆಬ್ಬಾವಿನ ಮೇಲೆ ನೆಗೆದು ಕುಳಿತುಕೊಳ್ಳೋಣ ತದನಂತರ ಅದರ ಕೊರಳಿಗೆ ಸಿಕ್ಕ ಉರಳನ್ನು ಕತ್ತರಿಸಲು ಒಬ್ಬ ವ್ಯಕ್ತಿ ಬೇಕಾಗುತ್ತದೆ. ಹಾಗಾದರೆ.. ಎಲ್ಲರೂ ರೆಡಿ… ನಾ? ಅಂತ ಪ್ರಶ್ನೆ ಮಾಡಿದೆ. ಹಾಂ ! ಹಾಂ ! ನಾವು ರೆಡಿ.. ನಾವು ರೆಡಿ.. ಅಂತ ಹೇಳಿದ ತಕ್ಷಣ ನಾಲ್ಕರಿಂದ ಐದು ಜನ ಹೆಬ್ಬಾವಿನ ಹತ್ತಿರ ನಿಧಾನಕ್ಕೆ ಹೋಗಿ ಸ್ವಲ್ಪ ದೂರದ ಅಂತರದಲ್ಲಿ ನಿಂತೆವು. ಆಗ ನಾನು ಈಗ ಸಮಯ ಶುರು.. ನೆಗೆಯಿರಿ ಅಂತ ಹೇಳಿದ ತಕ್ಷಣ ಎಲ್ಲರೂ ನೆಗೆದು ಅದರ ದೇಹದ ಮೇಲೆ ಕುಳಿತಿರುವ ಭಂಗಿಯ ಹಾಗೆ ಕುಳಿತು ಗಟ್ಟಿಯಾಗಿ ಹಿಡಿದೆವು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು ಹೆಬ್ಬಾವು ಒಂದು ಸಲಕ್ಕೆ ನಮ್ಮನ್ನೆಲ್ಲಾ ಅಲುಗಾಡಿಸಿ ಬಿಟ್ಟಿತು. ಅದರ ಶಕ್ತಿ ಎಂಥಹದು ಅಂತ ಅನುಭವ ಆಗಿದ್ದು ನಮಗೆ ಆ ಹೊತ್ತಿನಲ್ಲಿ ನಾವು ಸಹ ಅದನ್ನ ಗಟ್ಟಿಯಾಗಿ ಹಿಡಿದ್ದಿದ್ದೇವು. ಕೈ ಗಳು ಜಾರುತ್ತಿದ್ದರು ನಾವು ಅದನ್ನೆಲ್ಲ ಲೆಕ್ಕಿಸದೇ ಬೇಗ ಬೇಗ ಅದರ ದೇಹದ ಮೇಲೆ ನೀರು ಹಾಕುತ್ತಿದ್ದೇವು. ತದನಂತರ ಹೆಬ್ಬಾವು ನಮ್ಮ ನಿಯಂತ್ರಣಕ್ಕೆ ಬಂದ ತಕ್ಷಣ ಕೊನೆಯದಾಗಿ ಅದರ ಕೊರಳಿಗೆ ಸಿಕ್ಕ ಉರಳನ್ನ ಕತ್ತರಿಸಿ ತೆಗೆಯುವುದಾಗಿತ್ತು.

ಕಿರಣ ! ಕಿರಣ ! ಬೇಗ ಬೇಗ ಬನ್ನಿ ಅದರ ತಲೆಯ ಮೇಲೆ ಒಂದು ದೊಡ್ಡದಾದ ಬಟ್ಟೆಯನ್ನು ಹಾಕಿ ಕುತ್ತಿಗೆಯನ್ನ ಹಿಡಿದರು. ಕಿರಣ ಮತ್ತು ಶ್ರೀಧರ ಅದರ ದೊಡ್ಡ ತಲೆ ಹಿಡಿಯುವಷ್ಟರಲ್ಲಿ ಹರಸಾಹಸ ಪಡುತ್ತಿದ್ದರು ಸಹ ಅದು ಅವರ ಕೈಗೆ ಸಿಗುತ್ತಿರಲಿಲ್ಲ. ಹಾಗು ಹೀಗೂ ಮಾಡಿ ಅದರ ಕುತ್ತಿಗೆಯನ್ನು ಹಿಡಿದು ಪಕ್ಕದಲ್ಲಿ ಕುಳಿತ ಶ್ರೀಧರ ಅದರ ಕೊರಳಿಗೆ ಸಿಕ್ಕಿ ಹಾಕಿಕೊಂಡ ಉರಳು ಕುತ್ತಿಗೆಯನ್ನೆ ಸ್ವಲ್ಪ ಪ್ರಮಾಣದಲ್ಲಿ ಕತ್ತರಿಸಿ ಹಾಕಿತ್ತು . ಸ್ವಲ್ಪವು ಕಾಲ ವ್ಯಯ ಮಾಡದೇ ಅದರ ಕೊರಳಿಗೆ ಸಿಕ್ಕ ಉರಳನ್ನ ಕತ್ತರಿಸುವಲ್ಲಿ ಸಫಲರಾದೇವು.  ಮಾಡಿದ ಕಾರ್ಯ ಸಾರ್ಥಕವಾಯಿತು ಬದುಕಿತು ಹೆಬ್ಬಾವು! ಅಂತ ಸಂತಸದಿಂದ ಅದರ ತಲೆ ಮೇಲೆ ಹಾಕಿದ ಬಟ್ಟೆಯನ್ನು ತೆಗೆದು ಅದರ ಬೆನ್ನ ಮೇಲೆ ಕುಳಿತ ನಾವುಗಳು ಒಂದು ನೆಗೆತ ಹೊಡೆದು ಪಕ್ಕದಲ್ಲಿ ಜಿಗಿದು ಬಿಟ್ಟೇವು. ಅದರ ಮೈಯನ್ನು ತಂಪಾಗಿರಿಸಲು ನೀರನ್ನು ಎರಚಲು ಶುರುಮಾಡಿದೇವು. ಕೆಲ ಸಮಯದ ಬಳಿಕ ಹೆಬ್ಬಾವು ಚೇತರಿಸಿಕೊಂಡು ನಿಧಾನವಾಗಿ ತೆವಳುತ್ತ ತನ್ನ ಪ್ರಯಾಣ ಮುಂದುವರೆಸಿತು.

 

ಉರಳಿಗೆ ಸಿಕ್ಕಿ ಹಾಕಿಕೊಂಡ ಹೆಬ್ಬಾವನ್ನು ಪ್ರಥಮ ಚಿಕಿತ್ಸೆಯ ಮೂಲಕ ಬದುಕಿಸುವ ಪ್ರಯತ್ನದಲ್ಲಿ ನಿರತರಾದ ಸಿಬ್ಬಂದಿ ವರ್ಗದವರು ಮತ್ತು ಸ್ವಯಂ ಸೇವಕರ ದೃಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪುರ

ಅಂತು ಇಂತು ಒಂದು ಜೀವಿಯ ಪ್ರಾಣ ಉಳಿಸಿದೆ ಅಂತ ಖುಷಿ ಪಡುತ್ತಾ  ಸಾಗುತ್ತಾ ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣದ ಕುರುಚಲು ಕಾಡಿನ ಕಲ್ಲು ಬಂಡೆಗಳಿಂದ ಆವೃತವಾದ ಒಂದು ಪ್ರದೇಶದಲ್ಲಿ ನಮ್ಮ ತಂಡದವರು ಸಮೀಕ್ಷೆ ನಡೆಸುತ್ತಿದ್ದರು. ನನಗೆ ಅವತ್ತು ಒಂದು ಪ್ರದೇಶದ ಸಮೀಕ್ಷೆ ಕೈಗೊಳ್ಳಲು ಹೇಳಿದ್ದರು .

ತೆಲಂಗಾಣದ ‘ಮನ್ನನೂರು’ ಚೆಕ್ ಪೋಸ್ಟನಿಂದ ವ್ಯಾಪಿಸಿದ ‘ನಲ್ಲಮಲ’ ಅಭಿಯಾರಣ್ಯಕ್ಕೆ ಹೊಂದಿಕೊಂಡಿರುವ ದಾರಿಯ ಮಧ್ಯದಲ್ಲಿ ಸಿಗುವ ‘ಲೊದ್ದಿ ಮಲ್ಲಯ್ಯ’ ಎಂಬ ದೇವಸ್ಥಾನದ ಪಕ್ಕದಲ್ಲಿ ಒಂದು ಸಫಾರಿ ದಾರಿ ಇದೆ. ಈ ದಾರಿಯಲ್ಲಿ ನಮ್ಮ ಮೊದಲ ಹಂತದ ಆಕ್ಯೂಪೆನ್ಸಿ ಸರ್ವೆ ಕೆಲಸ ಶುರುವಾಗಿತ್ತು. ಬಹುಶಃ ಮಾರ್ಚ ತಿಂಗಳ ಸಮಯವಿರಬಹುದು. ನಾನು ಮತ್ತು ನನ್ನ ಜೊತೆ ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿ ಮಾತ್ರ ನನ್ನ ಜೊತೆ ಬಂದಿದ್ದರು.  ಆತನ ಕೈಯಲ್ಲಿ ದೊಡ್ಡದಾದ ಕೊಡಲಿ ಬಿಟ್ಟರೆ ಅದೆ ಆತನ ದೊಡ್ಡ ಆಯುಧವಾಗಿತ್ತು. ಬಾಯಲ್ಲಿ ಬೇವಿನ ಮರದ ಕಡ್ಡಿಯನ್ನು ಪಚಾ! ಪಚಾ! ಅಂತ ಅಗೆಯುತ್ತ ನಡಿರಿ.. ನಡಿರಿ.. ಸರ್ ಹೋಗೋಣ ಅಂತ ಒಂದೇ ಸಮನೇ ಹೇಳುತ್ತಿದ್ದ. ಬೆಳಿಗ್ಗೆ ಸಮಯ 8 ಗಂಟೆ ಚುರುಚುರು ಬಿಸಿಲು ಕೆಂಡದಂತೆ ಆವರಿಸಿತ್ತು . 12 ರಿಂದ 13 ಕಿ.ಮೀ ಗಳಷ್ಟು ನಡೆದುಕೊಂಡು ಹೋಗಬೇಕು . ದೊಡ್ಡ ಮಾರ್ಜಾಲಗಳ ಮತ್ತು ಸಸ್ಯಾಹಾರಿ ಪ್ರಾಣಿಗಳ ಹೆಜ್ಜೆಗಳನ್ನು ಗುರುತಿಸಿ ಅದರ ಬಗ್ಗೆ ಬಾಹ್ಯವಾಗಿ ಅಂಕಿ ಸಂಖ್ಯೆಗಳನ್ನು ತಿಳಿಯಲು ಡೇಟಾ ಶಿಟ್ ದಲ್ಲಿ ನಮೂದಿಸಿಕೊಳ್ಳುವಂತಹ ಕೆಲಸ ಅದಾಗಿತ್ತು. ಸರ್.. ಸರ್.. ನಾನು ಮುಂದೆ ನಡೆಯುತ್ತೇನೆ ನೀವು ನನ್ನ ಹಿಂದೆ ನಡೆರಿ ಅಂತ ಹೇಳಿದ . ಆಗ, ನಾನು ನೀವು ಮುಂದೆ ನಡೆದರೆ ನಿಮ್ಮ ಕಾಲಿನ ವಿಶಿಷ್ಟವಾದ ಅಗಲವಾದ ಚಪ್ಪಲಿಯ ಗುರುತುಗಳು ಸಿಗುತ್ತವೆ ವಿನಃ ಬೇರೇನೂ ಸಿಗುವುದಿಲ್ಲ ಅಂತ ಹೇಳುತ್ತಿರುವಾಗ ಪಚಾ! ಪಚಾ! ಅಂತ ಬಾಯಿ ಚಪ್ಪರಿಸುತ್ತಾ ಆಯಿತು ಸರ್.. ನೀವು ಮುಂದೆ ನಡೆಯಿರಿ ನಾನು ನಿಮ್ಮ ಹಿಂದೆ ಬರುತ್ತೇನೆ ಅಂತ ಹೊರಡಲು ಸಿದ್ದರಾದೇವು.

ಇನ್ನೇನು 1 ಕಿ.ಮೀ ದಾಟಿದ್ದೇವು ಆಗ ತಾನೆ ಕೆಲ ಹೊತ್ತಿನ ಸಮಯದಲ್ಲಿ ಹುಲಿರಾಯ ಮಣ್ಣಿನ ಹಾಸಿಗೆಯ ಮೇಲೆ ಮಲಗಿ ಹೋಗಿದ್ದ ಕುರುಹುಗಳು ಕಾಣಿಸಿದವು. ಇತನ ಬಾಯಿಯಿಂದ ಬರುವ ಪಚಾ! ಪಚಾ! ಅನ್ನುವ ಶಬ್ದ ನಿಂತು ಹೋಯಿತು. ಒಂದೇ ಸಮನೇ ನನ್ನನ್ನು ನೋಡುತ್ತ ಸರ್ …. ಇದು ಪಕ್ಕಾ 99% ಹುಲಿನೇ ಸರ್ ಅಂತ ಅಂದ. ಸರ್ ಹುಲಿ ಇಲ್ಲೆ ಎಲ್ಲೋ ಇರಬಹುದು ಹುಷಾರಾಗಿರಿ ಬನ್ನಿ ಮುಂದೆ ಹೋಗೋಣ ಅಂತ ಗಾಬರಿಯಿಂದ ನಿಧಾನವಾಗಿ ಹೆಜ್ಜೆ ಇಡುತ್ತ ಹೊರಡ ಬೇಕಾದರೆ ಮರದ ಬದಿಯಲ್ಲಿ ಅವಿತುಕೊಂಡಿರುವ ಕಡವೆ ಜೋರಾಗಿ ಕೂಗಿ ಬಿಟ್ಟಿತ್ತು. ಆ ಕಡವೆಯ ಶಬ್ದ ಕೇಳಿ ಎದೆ ಕಿತ್ತುಕೊಂಡು ಬಂದಂಗಾಯಿತು. ಎದೆ ಜೋರಾಗಿ ಢವ ಢವ ಅಂತ ಬಡಿದುಕೊಳ್ಳುತ್ತಿತ್ತು. ಬರೋಬ್ಬರಿ 12.8 ಕಿ.ಮೀ ನಷ್ಟು ನಡೆದು ಹೋಗಬೇಕಾದರೆ ನಮಗೆ ಅಲ್ಲಿ ಒಂದು ‘ಫರಹಾಬಾದ’ ವೀಕ್ಷಣ (Farahabad View Point) ಸ್ಥಳ ಸಿಕ್ಕಿತು. ಮುಂದೆ ಹೋಗಲು ಸಾಧ್ಯವಿಲ್ಲ ಆಳವಾದ ಬೆಟ್ಟ ಆಗಿದ್ದರಿಂದ ಏನಾದರೂ ಕಾಣಸಿಗಬಹುದು ಅಂತ ಅಲ್ಲೇ ಇರುವ ಒಂದು ಬಂಡೆಗಲ್ಲಿನ ಕೆಳಗೆ ಕುಳಿತು ನೋಡುತ್ತಿರುವಾಗ ಸ್ವಲ್ಪ ಸಮಯದ ಬಳಿಕ ಗುರ್… ಗುರ್ ಅಂತ ಶಬ್ದ ಕೇಳಲು ಶುರುವಾಯಿತು. ಮಧ್ಯ ಮಧ್ಯ ಕಾಡು ನಾಯಿಗಳು ಜೋರಾಗಿ ಕಿರಚುತ್ತಿದ್ದವು.

ನಿಧಾನವಾಗಿ ನಾನು ಮತ್ತು ಅರಣ್ಯ ಸಿಬ್ಬಂದಿ ಕಲ್ಲುಬಂಡೆಯಿಂದ ಹಣೆಯನ್ನು ಮೇಲಕ್ಕೆ ಎತ್ತಿ ನೋಡುತ್ತಿರುವಾಗ ಒಂದು ಮರದ ಮೇಲೆ ಚಿರತೆ ಕುಳಿತಿದೆ ಅದೇ ಮರದ ಕೆಳಗೆ 9 ರಿಂದ 10 ಕಾಡು ನಾಯಿಗಳು ಒಂದೇ ಸಮನೆ ಕಿರಚುತ್ತಿವೆ. ಚಿರತೆ ಮತ್ತು ಕಾಡು ನಾಯಿಗಳ ಮಧ್ಯೆ ಜಟಾಪಟಿ ನಡೆಯುತ್ತಿರುವುದನ್ನು ನಾವು 10 ನಿಮೀಷಗಳವರೆಗೆ ವೀಕ್ಷಿಸಿದೇವು. ಮರದ ಮೇಲೆ ಕುಳಿತ ಚಿರತೆ ಕೆಳಗೆ ಬರಲು ತವಕಿಸುತ್ತಿರುವಾಗ ಒಂದು ಕಾಡು ನಾಯಿಯ ಕಾಲನ್ನು ಚಿರತೆ ಕಚ್ಚಿ ಗಾಯಗೊಳಿಸಿತ್ತು. ಸೇಡಿನ ಪ್ರತಿಫಲವಾಗಿ ಕಾಡು ನಾಯಿಗಳು ಒಂದೇ ಸಮನೆ ಮರ ಹತ್ತಲು ಪ್ರಯತ್ನಿಸುತ್ತಿದ್ದವು ಆದರು ಮರ ಹತ್ತಲು ಆಗಲಿಲ್ಲ. ಬೇರೆ ಕಡೆಯಿಂದ ಜಿಗಿದು ಹೋಗ ಬೇಕೆಂದರು ಚಿರತೆಗೆ ಆಗುತ್ತಿರಲಿಲ್ಲ ಆಳವಾದ ಬಂಡೆ ಇದ್ದುದರಿಂದ ಮರದ ಮೇಲೆ ಚಿರತೆ ಸುಮಾರು ಹೊತ್ತು ಕೂತು ನಂತರದಲ್ಲಿ ಮರದ ಕೊಂಬೆಯಿಂದ ಇನ್ನೊಂದು ಮರಕ್ಕೆ ಜಿಗಿದೆ ಬಿಟ್ಟಿತು. ರಭಸದಿಂದ ಮರವನ್ನು ಇಳಿದು ಬಂಡೆಗಾಡುಗಳ ಮಧ್ಯದಿಂದ ಚಿರತೆ ಓಡಿ ಹೋಯಿತು. ಕಾಡು ನಾಯಿಗಳು ಸಹ ಚಿರತೆಯ ಬೆನ್ನು ಹತ್ತಿ ಓಡಿದರು ಪ್ರಯೋಜನವಾಗಲಿಲ್ಲ. ಬೆಟ್ಟದ ಮೇಲೆ ಒಂದೇ ಸಮನೆ ಅರಚುತ್ತ ನಿಂತು ಬೇಸರವಾಗಿ ಒಂದರ ಮೇಲೊಂದು ನೆಗೆಯುತ್ತ, ಅತ್ತಂದಿತ್ತ ಆಟವಾಡುತ್ತ ಓಡಿ ಹೋದವು.

ನಾವು ಸುಮಾರು ಹೊತ್ತು ಅಲ್ಲೇ ಇದ್ದು ಬಲು ಅಪರೂಪದ ‘ಜೋಡಿ-ಕಾಳಗ’ವನ್ನ ನೋಡಿ ಆನಂದಿಸಿದೇವು. ಇದೆ ಮೊದಲ ಬಾರಿಗೆ ಈ ತರಹದ ಚಿರತೆ ಮತ್ತು ಕಾಡು ನಾಯಿಗಳ ಕಾಳಗವನ್ನ ನೋಡಲು ಸಿಕ್ಕಿತು ಎಂಬುದರ ಬಗ್ಗೆ ವರ್ಣಿಸಲು ನನ್ನಲ್ಲಿ ಪದಗಳಿರಲಿಲ್ಲ. ಅದ್ಭುತ ಅಂತ ಮನಸ್ಸಿನಲ್ಲಿ ಅಂದು ಕೊಳ್ಳುತ್ತಿರುವಾಗ ನಮ್ಮನ್ನ ಕರೆದುಕೊಂಡು ಹೋಗಲು ನಮ್ಮ ತಂಡದ ಜೀಪಿನ ಶಬ್ದ ಕೇಳಿಸತೊಡಗಿತು. ಸಂಜೆಯ ಸಮಯವಾಗಿದ್ದರಿಂದ ನಾವು ಸಹ ಸ್ವಲ್ಪ ಸಮಯ ಪ್ರಶಾಂತವಾದ ವಾತಾವರಣದಲ್ಲಿ ಕಳೆದು ಅಲ್ಲಿಂದ ಹೊರಟುಹೋದೆವು.

 

ಮರದ ಮೇಲೆ ಕುಳಿತ ಚಿರತೆ ಮತ್ತು ಕಾಡುನಾಯಿಗಳ ಮಧ್ಯೆ ನಡೆಯುತ್ತಿರುವ ಕಾಳಗವನ್ನ ಬಂಡೆ ಬದಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಮನಮೋಹಕ ದೃಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪುರ

ಪ್ರಕೃತಿಯ ವಿಹಂಗಮ ನೋಟ ನನ್ನನ್ನು ಪ್ರತಿ ಕ್ಷಣವು ಹೊಸ ಆಯಾಮಗಳ ದಿಸೆಯಲ್ಲಿ ಕೊಂಡೊಯ್ಯುತ್ತಿತ್ತು.  ಪ್ರತಿ ನಿತ್ಯದ ದಿನಚರಿಯಲ್ಲಿ ಏನಾದರೂ ಒಂದು ಹೊಸ ತರಹದ ಘಟನೆಗಳು ಕ್ಷಣಾರ್ಧದಲ್ಲಿ ನಡೆದು ಹೋಗುತ್ತಿದ್ದವು. ವಿಸ್ಮಯಲೋಕದ ಬಾನಂಚಿನಲ್ಲಿ ಪ್ರಕೃತಿಯ ಒಡನಾಟದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತ ಸಾಗುತ್ತಿದ್ದೆ.

‘ವಟವರಲ್ ಪಲ್ಲಿ’ ಎಂಬ ಒಂದು ಪುಟ್ಟದಾದ ಹಳೆಯದಾಗಿರುವ ಗ್ರಾಮ. ಜನ ವಸತಿ ಇಲ್ಲದ ವಿದ್ಯುತ ಕಂಬಗಳ ದೊಡ್ಡದಾದ ಕಂಬಿಗಳು ಮಾತ್ರ ಇರುವಂತಹ ಅಗಲವಾದ ಬಂಡೆಗಳಿರುವ ಜಾಗ. ಒಂದಿನ ನಾನು ಮತ್ತು ನನ್ನ ಸಹದ್ಯೋಗಿಗಳಾದ ಬಾಪು ರೆಡ್ಡಿ , ಮೋಹನ ಜೊತೆಗೂಡಿ ಎರಡನೇ ಹಂತದ ಆಕ್ಯೂಪೆನ್ಸಿ ಸರ್ವೆ ಕಾರ್ಯ ಆ ಸ್ಥಳದಲ್ಲಿ ನಡೆಯುತ್ತಿತ್ತು. ಕಾಲನಡಿಗೆಯಲ್ಲಿ  ನಡೆಯಲು ಸುಗಮವಾದ ದಾರಿ. ದಾರಿ ಮಧ್ಯದಲ್ಲಿ ಹರಡಿಕೊಂಡಿರುವ ಹುಲ್ಲು ಮೊನಚಾಗಿ ಕಾಣಿಸುತ್ತಿತ್ತು. ನಾನು ಮತ್ತು ನನ್ನ ಹಿಂದೆ ಬಾಪು, ಬಾಪುವಿನ ಹಿಂದೆ ಮೋಹನ ಹುಲ್ಲುಗಾವಲಿನ ಮಧ್ಯೆ ನಡೆದುಕೊಂಡು ಹೋಗುತ್ತಿರಬೇಕಾದರೆ ಎತ್ತರೆತ್ತವಾದ ಅಗಲವಾದ ಬಂಡೆಗಳ ಮೇಲೆ ಬೃಹತ ಗಾತ್ರದ ವಿದ್ಯುತ ಕಂಬಿಗಳನ್ನ ಒಂದರಹಿಂದಿನಂತೆ ಒಂದನ್ನ ಸಾಲು ಸಾಲಾಗಿ ಅಗಲವಾದ ಜಾಗ ಎನ್ನದೇ ದೊಡ್ಡದಾದ ಬೆಟ್ಟ ಗುಡ್ಡಗಳಲ್ಲಿ ಹಾಕಿದ್ದರು.

ಈ ದೊಡ್ಡ ಗಾತ್ರದ ಕಂಬಿಗಳಿಂದ ಅರಣ್ಯ ಅರ್ಧ ಭಾಗಶಃ ಹದಗೆಟ್ಟು ಹೋಗಿತ್ತು. ಅಲ್ಲಲ್ಲಿ ಕಂಬಿಗಳ ಮಧ್ಯದಲ್ಲಿರುವ ಮರಗಳನ್ನ ಮನಬಂದಂತೆ ಕತ್ತರಿಸಿ ಹಾಕಿದ್ದರು. ಛೇ ! ಎಂತಹ ವಿಪರ್ಯಾಸ ದೊಡ್ಡದಾದ ಮರಗಳು ಧರೆಗೆ ಉರಿಳಿಸಿದನ್ನು ಕಂಡು ಮರುಕ ಪಡುತ್ತ ಮುಂದೆ ಸಾಗಬೇಕಾದರೆ ನಾನು ಬಲಗಡೆಯಿಂದ ಮತ್ತು ಬಾಪು ಎಡಗಡೆಯಿಂದ ನಡೆಯುತ್ತ ಮುಂದೆ ಸಾಗುವ ಸಮಯದಲ್ಲಿ ಒಂದು ಚಿಕ್ಕದಾದ ಮೌಂಸದ ಮೂಳೆ ನನ್ನ ಕಣ್ಣಿಗೆ ಬಿದ್ದಿತು. ರೀ.. ಬಾಪು! ನೋಡಿ ಇಲ್ಲಿ ಯಾವುದೋ ಪ್ರಾಣಿಯ ಹಸಿ ಮೌಂಸದ ಮೂಳೆಯಿಂದ ವಾಸನೆ ಬರುತ್ತಿದ್ದೆ ಬನ್ನಿ ಇಲ್ಲಿ ಅಂತ ಕರೆದೆ. ಅಷ್ಟರಲ್ಲಿ ಬಾಪು ನನ್ನ ಹತ್ತಿರ ಬಂದು ನೋಡುತ್ತ ಇದು ಯಾವುದೋ ಪ್ರಾಣಿಯದು ಇರಬಹುದು ನನಗೆ ಗೊತ್ತಿಲ್ಲ ಬನ್ನಿ ಬನ್ನಿ ಹೋಗೋಣ ಅಂತ ಕರೆದರು. ನನಗೆ ಯಾಕೋ ಒಂದು ಕಡೆ ಸಂಶಯ ಶುರುವಾಯಿತು ಇಲ್ಲಿ ಏನೋ ಇದೆ ಮುಂದೆ ಸಿಕ್ಕರು ಸಿಗಬಹುದು ಅಂತ ಅಂದುಕೊಳ್ಳುತ್ತ ಸಾಗುವಾಗ ದಾರಿಯ ಮಧ್ಯದಲ್ಲಿ ಬೆಳೆದಿರುವ ಹುಲ್ಲನ್ನು ಸರಿಸಿ ಸಣ್ಣ ಗಾತ್ರದ ಬಂಡೆಯನ್ನು ಹತ್ತಿದ ಕೂಡಲೆ ನೋಡನೋಡುತ್ತಲೆ ಎರಡು ಹುಲಿ ಮರಿಗಳು ನಮ್ಮತ್ತ ಎಗರೆ ಬಿಟ್ಟವು. ಎಗರಿದ ರಭಸಕ್ಕೆ ನಾನು ಮತ್ತು ಬಾಪು ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಾಗ ಬಲಬದಿಯಿಂದ ಒಂದು ಹುಲಿಮರಿ ಮತ್ತು ಎಡಬದಿಯಿಂದ ಇನ್ನೊಂದು ಹುಲಿ ಮರಿ ಜಿಗಿದು ಓಡಲು ಶುರುಮಾಡಿದವು.

ಪಾಪ! ಚಿಕ್ಕ ಗಾತ್ರದ ಹುಲಿಗಳು ಬಿಸಿಲಿನ ತಾಪಕ್ಕೆ ಚಿಕ್ಕ ಮರದ ಬುಡದಲ್ಲಿ ಕುಳಿತು ಮೂಳೆ ಅಗೆಯುತ್ತಾ ಇದ್ದವು. ನಮ್ಮನ್ನ ನೋಡಿ ದಡದಡ ಅಂತ ಓಡಿಹೋದವು. ಅವುಗಳನ್ನ ನೋಡಿ ಬಾಪು ಸಹ ಎಸ್ಕೇಪ. ರೀ.. ಬಾಪು! ಓಡಬೇಡಿ ಅಂತ ಹೇಳಲು ಸಾಧ್ಯವಾಗದ ಸಂದರ್ಭ ಯಾಕೆಂದರೆ ಆ ಚಿಕ್ಕ ಮರಿಗಳ ತಾಯಿ ಎಲ್ಲೋ ಬೇರೆ ಕಡೆ ಅಲೆಯುತ್ತಾ ಹೋಗಿತ್ತು. ಆ ಕ್ಷಣದಲ್ಲಿ ನನ್ನ ಹಿಂದೆ ಇದ್ದ ಮೋಹನ ಹೆದರಿಕೆಯಿಂದ ಹುಲಿಗಳನ್ನ ನೋಡಲೆ ಇಲ್ಲ.  ನೋಡಿ ಮೋಹನ ಅಲ್ಲಿ ನೋಡಿ ಹುಲಿಗಳು ಓಡುತ್ತಿರುವುದು ಕಾಣಸ್ತಾ ಇದೇಯಾ ಅಂತ ನಿಧಾನವಾಗಿ ಸನ್ನೆ ಮಾಡಿ ತೋರಿಸಿದೆ ಅಷ್ಟರಲ್ಲಿ ಹುಲಿಗಳು ಬೇರೆ ಕಡೆ ಎಸ್ಕೇಪ್ ಆಗಿದ್ದವು. ಮೋಹನರವರಿಗೆ ಆ ದಿನ ಬ್ಯಾಡಲಕ್ ಆಗಿತ್ತು. ಅಯ್ಯೋ! ಸರ್.. ಸೈಟಿಂಗ ಕೈ ತಪ್ಪಿಹೋಯಿತು ಅಂತ ಅನ್ನುವಷ್ಟರಲ್ಲಿ ಬಾಪುವಿನ ಕೈಯಲ್ಲಿದ್ದ ಜಿ.ಪಿ.ಎಸ್ ಒಂದು ಕಡೆ ಬಿದ್ದಿರುವುದನ್ನು ಕಂಡು ಹುಡುಕಿ ತಂದೆ. ಬಾಪುರವರ ಜೀವ ಮಾನದ ಮೊದಲ ಸೈಟಿಂಗ್ ಆ ಎರಡು ಹುಲಿ ಮರಿಗಳಾಗಿದ್ದವು. ಗಾಬರಿಯಿಂದ ಬಾಪುರವರ ಕಾಲುಗಳು ಗಡ ಗಡ ಅಂತ ಅಲುಗಾಡುತಿರಲು ಬೇಡ ಮುಂದೆ ಹೋಗುವುದು ಬೇಡ ಇಲ್ಲೆ ಸರ್ವೆ ಮುಗಿಸಿ ಮರಳಿ ಹೋಗಿ ಬಿಡೋಣ ಅಂತ ಗೋಗೆರದರು ಹೀಗಾಗಿ ಅರ್ಧದಲ್ಲೆ ಸರ್ವೆಯನ್ನ ಮುಗಿಸಿ ಮರಳಿ ಅದೇ ದಾರಿಯಿಂದ ರಸ್ತೆಗೆ ಬಂದು ತಲುಪಿದೇವು.

 

ಚಿಕ್ಕ ಗಾತ್ರದ ಮರಗಳ ಬದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಹುಲಿಮರಿಗಳನ್ನ ತದೇಕ ಚಿತ್ತದಿಂದ ಕಕ್ಕಾಬಿಕ್ಕಿಯಾಗಿ ನೋಡುತ್ತಿರುವ ದೃಶ್ಯ | ಚಿತ್ರ ರಚಿಸಿದವರು – ಕೃಷ್ಣಾ ಸಾತಪುರ

ಕೊನೆಯ ಭಾಗ ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು.

 

‘My Journey from the Magical World of Western Ghats to Rocky Hills of Eastern Ghats’ (Kannada – Part I)

‘My Journey from the Magical World of Western Ghats to Rocky Hills of Eastern Ghats (Kannada – Part II)

My Journey from the Magical World of Western Ghats to Rocky Hills of Eastern Ghats (Kannada – Part III)

17 Responses

 1. Rajendrakumar Annasaheb Telasang. Science Teacher. Govt High School Nagaral Tq:Raibag says:

  Brother, I am proud of you.
  🌴🌲🌳🌻🌷🌹ನಿಮ್ಮ ಪರಿಸರ ಪ್ರೀತಿಯನ್ನು ಮನಸಾರೆ ಮೆಚ್ಚಿದೆ. ನಿಮ್ಮ ಬರಹದ ಪ್ರತಿ ಹಂತದಲ್ಲಿಯೂ ಕುತೂಹಲ, ರೋಮಾಂಚನ, ರೋಚಕತೆ, ನೈಜ ಅನುಭವಗಳೇ ತುಂಬಿವೆ. ಓದುತ್ತಾ ಹೋದಂತೆ, ಕಾಡಿನಲ್ಲಿ ನಾವೂ ಕೂಡ ಗೊತ್ತಿಲ್ಲದಂತೆ ನಿಮ್ಮೊಂದಿಗೆ ಹೆಜ್ಜೆ ಹಾತ್ತಿದ್ದೆವೇನೋ ಎನ್ನುವ ಸ್ವಾನುಭವ. ಹುಲಿ, ಹಾವುಗಳೊಂದಿಗೆ ನೀವು ಎದುರಿಸಿದ ಆ ಕ್ಷಣಗಳು ನಮ್ಮಲ್ಲಿ ಒಂದೊಮ್ಮೆ ಆತಂಕ ಹಾಗೂ ಭಯವನ್ನು ಉಂಟು ಮಾಡುತ್ತವೆ. ನಿಮ್ಮ ಎಂಟೆದೆಯ ಗುಂಡಿಗೆಗೆ ನನ್ನದೊಂದು ಸೆಲೂಟ್. ನಿಮ್ಮ ಧೈರ್ಯ-ಸಾಹಸಗಾತೆಯ ಅನುಭವಗಳನ್ನು ನಮ್ಮೆದೆಗೆ ನಾಟುವಂತೆ ನಾಟಿ ಮಾಡಿದ ಪರಿ ಸ್ತುತ್ಯಾರ್ಹ.
  ಹೀಗೇ ಅನಂತವಾಗಿ ಸಾಗಲಿ ನಿಮ್ಮೀ ಪಯಣ. ಇರಲಿ ಅದಕ್ಕೆ ನನ್ನದೊಂದು ಶುಭಹಾರೈಕೆ.❤️From the bottom of my heart.

  🌷”Nature never betrays the heart who Loves it”🌷

 2. Nishanth says:

  Article is very nice Satish…there is suspense and comedy too…read the article and imagined you saying the story😄

 3. Santosh says:

  Hi Sathish Sir,
  Am a big fan of your articles. Now I recall the incident of tiger cubs. And fascinated story in the evening by Bapu and you. I love the way you have explained it. Looking for more articles.

 4. Mahipati says:

  Really you are very lucky Satish. You got such wonderful experience in nature. Keep up the good work. All the very best for your future.

 5. Vijaykumar Biradar says:

  ಮೊದಲನೆಯದಾಗಿ ನಿಮಗೆ ಅಭಿನಂದನೆಗಳು.. ನಿಮ್ಮ ಬರವಣಿಗೆ ಕಣ್ಣಿಗೆ ಕಟ್ಟುವಂತಿದೆ.. ನಿಮ್ಮ ಈ ನಿಸರ್ಗದ ಜೊತೆಗಿನ ಅನುಬಂಧ ಹೀಗೇ ಮುಂದುವರೆಯಲಿ…

 6. L.H.Kulkarni. says:

  Excellent description of the nature. Was very thrilled to read your adventurous effort in saving the life of the python, which was trapped by the poachers. Your concern for the wild life is really praiseworthy. Please be careful while handling the wildlife. Felt very happy while reading your description. Keep it up.

 7. Viresh says:

  Very nice article, keep up the good work

 8. Prakash B Bheemanagar says:

  Super Satish keep it up..

 9. ಸರ್,
  ನಿಮ್ಮ ಸುಂದರ ಬರವಣಿಗೆಯ ಕೌಶಲ್ಯದಿಂದ ಅಕ್ಷರಗಳನ್ನು ಪೊಣಿಸಿ ರಚಿಸಿದ ನಿಮ್ಮ ರಸಾನುಭವವುಳ್ಳ ಬಿಡಿ ಬಿಡಿಯಾಗಿ ರಚಿಸಿದ ಲೇಖನದ ತುಣುಕಗಳನ್ನು ಸವಿಯಲು ತುಂಬಾ ಖುಷಿಯನ್ನ ಕೊಡುತ್ತೆ.ಅದರಲ್ಲಿರುವ ಸನ್ನಿವೇಶವನ್ನ ವಾಚಿಸುತ್ತಾ ಹೊದಂತೆ ಮನದಲ್ಲಿ ಕುತೂಹಲ ಉಂಟು ಮಾಡುವುದರಲ್ಲಿ ಎರಡು ಮಾತೆ ಇಲ್ಲ.ಇಲ್ಲಿ ನಿವು ಹೆಬ್ಬಾವನ್ನ ಪ್ರಾಣಾಪಾಯದಿಂದ ಬಚಾವ ಮಾಡಿ ಅದಕ್ಕೆ ಪೂನರ್ಜನ್ಮ ನೀಡಿ ಮಾನವಿಯತೆಯಿಂದ ಮೆರೆದಿದಂತು ನಮ್ಮೆಲ್ಲರ ಪಾಲಿಗೆ ಹೆಮ್ಮೆಯುಂಟು ಮಾಡುವ ಸಂಗತಿಯೇ ಸರಿ.ನಂತರ ತಾವು ಚಿರತೆ ಮತ್ತು ಕೆನ್ನಾಯಿಗಳು ಮಹಾಭಾರತದ ಕುರುಕ್ಷೇತ್ರದಲ್ಲಿ ಕೊನೆಯ ಘಳಿಗೆಯಲ್ಲಿ ಭೀಮ ಮತ್ತು ದುರ್ಯೋಧನು ಗಧಾಯುದ್ಧದಿಂದ ಕಾದಾಡುತ್ತಿದ್ದಂತೆ ಇವುಗಳ ಕಾಳಗವು ರೋಮಾಂಚನವಾಗಿತೆಂದು ಗಮನಾರ್ಹವಾಗಿ ವಿವರಿಸಿದ್ದಿರಿ.ಇನ್ನು ಸರ್ವೆ ಕಾರ್ಯದ ಮೇಲೆ ನಿವು ಒಂದು ಹಳ್ಳಿಗೆ ಹೊದಾಗ ಅರಣ್ಯ ನಾಶವಾಗಿ ಇಂದು ಯಾಂತ್ರೀಕರಣದ ಮಧ್ಯೆ ಪ್ರಾಣಿ ಜೀವ ಸಂಕುಲ ಮರೆಮಾಚಿಯಾಗಿ ಅವು ಜೀವಿಸಲು ತೊಂದರೆಯುಂಟು ಆಗಿರುವುದನ್ನು ತುಂಬಾ ಮಾರ್ಮಿಕವಾಗಿ ವಿವರಿಸಿದ್ದಿರಿ .ಅದನ್ನ ಓದುತ್ತಿದಂತೆ ನನಗೆ DELHI SAFARI movie ಕಣ್ಣಂಚಿನಲ್ಲಿ ಹಾದು ಹೊದಂತೆ ಆಯಿತು.ಇಲ್ಲಿ ಬರುವ ಸನ್ನಿವೇಶವು ಕಲ್ಪನೆಗಳತ್ತ ಕಂಡೊಯ್ಯುತಿದ್ದರೆ,ಇನೊಂದು ಕಡೆ ಈ ಲೇಖನ ಓದಿ ಮುಗಿಸಿರುವುದು ಕೂಡಾ ನನಗೆ ಗೊತ್ತಾಗಲಿಲ್ಲ…..!
  ಇಂತಹ ಸುಂದರ,ಕುತೂಹಲಕಾರಿ ಲೇಖನಕ್ಕೆ DRAWINGS ಬಿಡಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ನಿಮಗೆ ಅನಂತ ಧನ್ಯವಾದಗಳು.
  KRISHNA SATAPUR
  krishnasatapur@gmail.com
  WhatsApp No: 9740487500.

 10. Girish namadar says:

  ಆತ್ಮೀಯ ಸತೀಶರವರೇ,ನೀವು ಬರೆದ ಅಂಕಣ ಪತ್ತೇದಾರಿ ಕಾದಂಬರಿ ತರಹ ಓದಿಸಿಕೊಂಡು ಹೋಗುತ್ತಿದೆ.ನಿಮ್ಮ ನವಿರಾದ ನಿರೂಪಣೆ ನಾವೂ ಕೂಡ ನಿಮ್ಮ ಜೊತೆಯಲ್ಲಿ ಪಯಣಿಸುತ್ತಿದ್ದೇವೇನೋ? ಎಂಬ ಭ್ರಮೆ ಯನ್ನು ಉಂಟು ಮಾಡಿದ್ದು ಸುಳ್ಳಲ್ಲ. ಅಲ್ಲದೇ ವಿಸ್ಮಯ ಲೋಕದ ಬಾನಂಚಿನಲ್ಲಿ ಅನ್ನೋ ಸಾಲು ನಿಮ್ಮೊಳಗಿನ ಕವಿಯನ್ನು ಪರಿಚಯಿಸಿತು. ಕೊನೆಯ ಅಂಕಣ ಶೀಘ್ರವಾಗಿ ಬರಲಿ,ಆದರೆ ಅದೇ ಕೊನೆಯದಾಗದಿರಲಿ.Best of luck

 11. Satish.g .kulkarni says:

  It is a very good article .in future you will
  become work for national geographic &
  discovery and many wild animal channel.
  best of luck in future.

 12. Rayanagouda B Patil says:

  I suggest do the web serious which will create more visualization to the end readers

 13. Appu jadhav says:

  ಸರ್ ತಮ್ಮ ಮಾಯಾ ಲೋಕದ ಅನುಭವ ತುಂಬಾ ರೋಮಾಂಚನ ದಿಂದ ಕೊಡಿದೆ ಸರ್ ಹಾಗೂ ಹೆಬ್ಬಾವಿನ್ ಪ್ರಾಣ ರಕ್ಷಣೆ ಮಾಡಿದಕ್ಕೆ ಸಂತೋಷ ಕೊಡಾ ಆಯಿತು ನಾನು ಭಾಗ 3 ನು ಓದಿದೆ ಅದು ಅರ್ಧಕ್ಕೆ ನಿಂತಿತು. ಅವಾಗಿನಿಂದ ನಾನು ಕಾತರ ದಿಂದ ಕಾಯಿತಾ ಇದೆ. ಭಾಗ 4 ಸಲುವಾಗಿ ತಮ್ಮ ಆರ್ಟಿಕಲ್ ಓದಿ ತುಂಬಾ ರೋಮಾಚನ್ ಆಯಿತು ಸರ್ ಹಾಗೂ ತಮ್ಮಿಂದ ಇನ್ನೂ ಹಿಂತವು ಹಲವಾರು ಬರವಣಿಗೆ ಗಳು ಹೊರಬರಲೆಂದು ನಾನು ಹಾರೈಸುತ್ತೇನೆ
  ಇಂತಿ ತಮ್ಮ್ ವಿಸವಾಶಿ
  ಅಪ್ಪು ಕ ಜಾಧವ್

 14. MOHANA KUMAR says:

  ಸರ್ ತುಂಬ ಚೆನ್ನಾಗಿದೆ

 15. Praveenkumar says:

  Good thoughts and information and also messages givin by this article

 16. Shaukat kotwal says:

  God article and message for people who love Wilda’s adventure.

 17. Vikaspatil says:

  Too good 😍😍

Leave a Reply

Your email address will not be published. Required fields are marked *

WE STAND FOR WILDLIFE